ಮೈಕ್ರೊನೇಷ್ಯ
ಪೆಸಿಫಿಕ್ ಸಾಗರದಲ್ಲಿರುವ ಮೂರು ಮುಖ್ಯ ದ್ವೀಪಸ್ತೋಮಗಳ ವಿಭಾಗಗಳಲ್ಲೊಂದು. ಉಳಿದೆರಡು ಮೆಲನೇಷ್ಯ ಮತ್ತು ಪಾಲಿನೇಷ್ಯ. ಪಾಲಿನೇಷ್ಯದ ಪಶ್ಚಿಮಕ್ಕೆ ಮತ್ತು ಮೆಲನೇಷ್ಯದ ಉತ್ತರಕ್ಕೆ ಇರುವ ಈ ದ್ವೀಪ ಸಮೂಹ ಉತ್ತರ ಅಕ್ಷಾಂಶ 1( - 20(32', ಹಾಗೂ ಪೂರ್ವರೇಖಾಂಶ 131( - 177( ನಡುವೆ ಇದೆ. ಮೈಕ್ರೋನೇಷ್ಯ ಉತ್ತರದಲ್ಲಿಯ ಮಿಡ್ವೆ ದ್ವೀಪದಿಂದ 5000 ಕಿಮೀ ದಕ್ಷಿಣದಲ್ಲಿರುವ ನ್ಯೂಜಿûಲೆಂಡ್‍ವರೆಗಿನ ವಿಸ್ತಾರವಾದ ಪ್ರದೇಶವನ್ನು ಆವರಿಸಿದೆ. ಮೈಕ್ರೊನೇಷ್ಯ ಎಂದರೆ ಸಣ್ಣ ದ್ವೀಪಗಳು ಎಂದರ್ಥ. ಇಲ್ಲಿರುವ ಒಟ್ಟು ದ್ವೀಪಗಳ ಸಂಖ್ಯೆ 2000ಕ್ಕೂ ಹೆಚ್ಚೆಂದು ಅಂದಾಜು ಮಾಡಲಾಗಿದೆ. ಇಲ್ಲಿಯ ದ್ವೀಪಗಳನ್ನು ಕೆರೋಲಿನ್ಸ್, ಕಿರಿಬಾಟಿ, ಮಾರಿಯಾನಾಸ್ ಮತ್ತು ಮಾರ್ಷಲ್ಸ್ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಅತ್ಯಂತ ದೊಡ್ಡ ದ್ವೀಪ ಗ್ವಾಮ್. ಇದು 48 ಕಿ.ಮೀ. ಉದ್ದ ಹಾಗೂ 6ರಿಂದ 15 ಕಿ.ಮೀ. ಅಗಲವಾಗಿದೆ. ಮಾರಿಯಾನಾಸ್‍ನಲ್ಲಿರುವ ಗ್ವಾಮ್, ಸೈಪಾನ್ ಮತ್ತು ಟೆನಿಯನ್ ಹಾಗೂ ಕೆರೊಲಿನ್ಸ್‍ನಲ್ಲಿಯ ಯಾಪ್, ಪಲಾವೊ, ಟ್ರುಕ್, ಪನಾಪೆ ಮತ್ತು ಕುಸಾಯ್, ಜ್ವಾಲಾಮುಖಿಯ ಮೂಲದಿಂದ ಉಂಟಾಗಿರುವ ಎತ್ತರದ ದ್ವೀಪಗಳು. ಉಳಿದವು ಚದುರಿದ ಹವಳದ ದಿಬ್ಬಗಳಿಂದ ನಿರ್ಮಿತವಾದವು. ಮಾರಿಯಾನಾಸ್‍ನಲ್ಲಿಯ ಸುಮಾರು 964 ಮೀಟರ್ ಎತ್ತರದ ಅಗ್ರಿಹಾನ್ ಅತ್ಯಂತ ಎತ್ತರ ದ್ವೀಪ. ಮೈಕ್ರೋನೇಷ್ಯದಲ್ಲಿಯ ಒಟ್ಟು ಭೂಭಾಗ 3271 ಚ.ಕಿ.ಮೀ. ಇದರ ಬಹುಪಾಲು ಸಮಭಾಜಕ ವೃತ್ತದ ಉತ್ತರಕ್ಕಿದೆ. ಒಟ್ಟು ಜನಸಂಖ್ಯೆ 1,23,000 (1997).

ಭೂಲಕ್ಷಣ : ಮೈಕ್ರೊನೇಷ್ಯದ ದ್ವೀಪಗಳು ಸಮುದ್ರದಾಳದ ಬಿರುಕುಗಳಿಂದ ಹೊರಬಂದ ಲಾವಾರಸದಿಂದ ಉಂಟಾದ ಕಡಿದಾದ ಭೂಭಾಗವನ್ನು ಹೊಂದಿವೆ. ಸಾಮಾನ್ಯವಾಗಿ ಎಲ್ಲ ದ್ವೀಪಗಳಲ್ಲೂ ಕಡಿದಾದ ಶಿಖರಗಳು, ಬೆಟ್ಟ ಸಾಲುಗಳು, ಆಳವಾದ ಕಮರಿಗಳು, ಜಲಪಾತಗಳು ಹವಳದ ದಿಬ್ಬಗಳು ಹಾಗೂ ಸಾಲುಗಳು. ಆಳವಾದ ಕಮರಿಗಳು, ಜಲಪಾತಗಳು ಹವಳದ ದಿಬ್ಬಗಳು ಹಾಗೂ ಮಧ್ಯೆ ಆಳವಿಲ್ಲದ ನೀರಿನಿಂದ ಕೂಡಿದ ಚಕ್ರಾಕಾರದ ಹವಳದ ದಿಬ್ಬಗಳು (ಅಟಾಲ್‍ಗಳು) ಕಂಡುಬರುತ್ತವೆ. ಇವುಗಳ ಪೈಕಿ ಮಾರ್ಷಲ್ಸ್‍ನಲ್ಲಿಯ ಕ್ವಾಜಾಲೇನ್ ಅಟಾಲ್ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು.
ಇಲ್ಲಿ ವರ್ಷವಿಡೀ ಹೆಚ್ಚುಕಡಿಮೆ ಒಂದೇ ರೀತಿ ಉಷ್ಣತೆ ಕಂಡುಬರುತ್ತದೆ. ಸರಾಸರಿ ಉಷ್ಣತೆ 27( ಸೆಲ್ಸಿಯಸ್‍ನಿಂದ 29( ಸೆಲ್ಸಿಯಸ್. ಮೇ ನಿಂದ ಡಿಸೆಂಬರ್ ತನಕ ಮಳೆಗಾಲ. ಉಳಿದ ಕಾಲದಲ್ಲಿ ಒಣಹವೆ ಇರುತ್ತದೆ. ವರ್ಷದುದ್ದಕ್ಕೂ ಬಿರುಗಾಳಿಯ ಭಯವಿದ್ದು ಜುಲೈನಿಂದ ಅಕ್ಟೋಬರ್ ತನಕ ಇದರ ಹಾವಳಿ ಹೆಚ್ಚು. ಇಲ್ಲಿಯ ವಾರ್ಷಿಕ ಅನುಪಾತದ ಪ್ರಮಾಣ 2540 ಮಿ.ಮೀ.ಗಳಿಗೂ ಹೆಚ್ಚು. ಸಮಭಾಜಕ ವೃತ್ತದ ಮೇಲಿನ ನೌರು ಮತ್ತು ಕಿರುಬಾಟಿ ವಾರ್ಷಿಕ ಅನುಪಾತದ ಪ್ರಮಾಣ 1000 - 2000 ಮಿ.ಮೀ. ಇದ್ದು ಮೈಕ್ರೊನೇಷ್ಯದಲ್ಲಿಯೇ ಇವು ಅತ್ಯಂತ ಶುಷ್ಕ ಪ್ರದೇಶಗಳಾಗಿವೆ. 

ಭೂ ಪ್ರದೇಶದ 1/3 ಭಾಗ ಕೃಷಿಯೋಗ್ಯವಾಗಿದೆ. ತೆಂಗು ಮತ್ತು ಕಸಾವಾ ಇಲ್ಲಿಯ ಮುಖ್ಯ ಬೆಳೆಗಳು. ಒಟ್ಟು ಭೂಪ್ರದೇಶದ 1/6 ರಷ್ಟು ಭಾಗ ಅರಣ್ಯ ಪ್ರದೇಶ. ಮ್ಯಾಂಗ್ರೋವ್ ಮತ್ತು ಸಮುದ್ರ ತೀರದಲ್ಲಿ ಕಂಡುಬರುವ ಕಾಡುಗಳು ಇಲ್ಲಿ ಹೆಚ್ಚಾಗಿದ್ದು ಉಳಿದ ಭಾಗ ಕುರುಚಲು ಗಿಡಗಳನ್ನೊಳಗೊಂಡಿದೆ. ಇಲ್ಲಿ ಸರ್ಪಗಳು, ಹಲ್ಲಿಗಳು ಹಾಗೂ ಅನೇಕ ಬಗೆಯ ಪಕ್ಷಿಗಳೂ ಇವೆ. ಮರಳು ದಿಬ್ಬಗಳು ಮತ್ತು ಲಗೂನ್‍ಗಳಲ್ಲಿ ಸಮುದ್ರನಳ್ಳಿ, ಸೀಗಡಿ, ಚಿಪ್ಪುಮೀನು, ಸಿಂಪಿ, ಅಕ್ಟೋಪಸ್ ಮತ್ತು ಆಮೆಗಳು ಹೇರಳವಾಗಿವೆ. ಮೈಕ್ರೊನೇಷ್ಯದ ದ್ವೀಪಗಳ ಭೂಮಿ ಅಗ್ನಿಶಿಲೆಗಳಿಂದ ನಿರ್ಮಿತವಾದ್ದರಿಂದ ಇಲ್ಲಿ ಖನಿಜಗಳು ಸಿಗುವುದಿಲ್ಲ. 
ಜನಜೀವನ: ಜನಸಾಂದ್ರತೆ ಅಲ್ಲಿ ದ್ವೀಪದಿಂದ ದ್ವೀಪಕ್ಕೆ ಬದಲಾಗುತ್ತದೆ. ಸರಾಸರಿ ಜನಸಾಂದ್ರತೆ ಚ.ಕಿ.ಮೀ.ಗೆ 1108. ಕೆಳಮಟ್ಟದ ದ್ವೀಪಗಳಿಂದ ಎತ್ತರದ ದ್ವೀಪಗಳಿಗೆ ಆರ್ಥಿಕ ಮತ್ತು ಇತರ ಅನುಕೂಲತೆಗಳ ಕಾರಣದಿಂದ ವಲಸೆ ಹೆಚ್ಚಾಗಿದೆ. ಅಲ್ಲಿಯ ಜನ ಉದ್ದವಾಗಿದ್ದು ಬಿಳಿಬಣ್ಣದವರಾಗಿ ಗುಂಗುರು ಕೂದಲುಗಳಿಂದ ಕೂಡಿರುತ್ತಾರೆ. ಏಷ್ಯದ ಸಮೀಪದ ದ್ವೀಪಗಳ ನಿವಾಸಿಗಳಿಗೆ ಎತ್ತರದ ಕೆನ್ನೆಯೆಲುಬು ಮತ್ತು ನೇರವಾದ ಕೂದಲು ಇರುತ್ತದೆ. ಪಾಲಿನೇಷ್ಯದ ಸಮೀಪದ ದ್ವೀಪವಾಸಿಗಳು ಎತ್ತರವಾಗಿದ್ದು ತಿಳಿಬಣ್ಣ ಹೊಂದಿರುತ್ತಾರೆ. 

ಮೈಕ್ರೊನೇಷ್ಯದಲ್ಲಿ 9 ಪ್ರಮುಖ ಭಾಷೆಗಳಿವೆ. ಇವು ಮಲಯೊ-ಪಾಲಿನೇಷ್ಯದ ಮೂಲಕ್ಕೆ ಸೇರಿದ್ದು ಪರಸ್ಪರ ಸಂಬಂಧ ಹೊಂದಿವೆ. ಎಲ್ಲಿಸ್ ದ್ವೀಪಗಳು, ನುಕುವಾರೊ ಮತ್ತು ಕಪಿಂಗ- ಮರಂಗಿ ದ್ವೀಪಗಳಲ್ಲಿ ಪಾಲಿನೇಷ್ಯನ್ ಭಾಷೆಗಳನ್ನು ಮಾತನಾಡುತ್ತಾರೆ. ಮೈಕ್ರೊನೇಷ್ಯದ ಎಲ್ಲ ಭಾಗಗಳಲ್ಲೂ ಇಂಗ್ಲಿಷ್ ಬಳಕೆಯಲ್ಲಿದೆ. 

ಆರ್ಥಿಕತೆ: ಮೈಕ್ರೊನೇಷ್ಯದ ಬಹುಪಾಲು ದ್ವೀಪಗಳು ಆರ್ಥಿಕವಾಗಿ ಹಿಂದುಳಿದಿವೆ. ಇಲ್ಲಿಯ ಜನರ ಮುಖ್ಯ ಕಸುಬು ಕೃಷಿ ಮತ್ತು ಮೀನುಗಾರಿಕೆ. ಪ್ರಮುಖ ಬೆಳೆ ತೆಂಗು. ಜೊತೆಗೆ ಬ್ರೆಡ್‍ಫ್ರೂಟ್, ಕಸಾವಾ, ಟಾರೋ, ಗೆಣಸು, ಬಾಳೆಹಣ್ಣು, ಕಿತ್ತಳೆ, ಅನಾನಸ್ ಮತ್ತು ತರಕಾರಿಗಳನ್ನೂ ಕೆಲವು ದ್ವೀಪಗಳಲ್ಲಿ ಭತ್ತ, ಮೆಕ್ಕೆಜೋಳ ಮತ್ತು ಕೋಕೋವನ್ನೂ ಬೆಳೆಯುತ್ತಾರೆ. ಎಲ್ಲ ದ್ವೀಪಗಳಲ್ಲಿ ಹಂದಿ ಮತ್ತು ಕೋಳಿ ಸಾಕುತ್ತಾರೆ. ಗ್ವಾಮ್, ಮತ್ತಿತರ ದೊಡ್ಡ ದ್ವೀಪಗಳಲ್ಲಿ ಎಮ್ಮೆ ಮತ್ತು ದನಗಳನ್ನು ಸಾಕುತ್ತಾರೆ. ಹಾಲು ಮತ್ತಿತರ ಹೈನು ಪದಾರ್ಥಗಳನ್ನು ಎಲ್ಲ ದ್ವೀಪಗಳಲ್ಲೂ ಆಮದು ಮಾಡಿಕೊಳ್ಳಲಾಗುತ್ತದೆ. ಮೀನು ಎಲ್ಲ ಕಡೆಗಳಲ್ಲೂ ಹೇರಳವಾಗಿ ದೊರೆಯುತ್ತಿದ್ದರೂ ಗ್ವಾಮ್, ಕಿರಿಬಾಟಿ ಮೊದಲಾದ ಕೆಲವೇ ದ್ವೀಪಗಳಲ್ಲಿ ವಾಣಿಜ್ಯಮಟ್ಟದಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ. ಜಪಾನು ಕಿರಿಬಾಟಿಯೊಂದಿಗೆ ಮೀನುಗಾರಿಕೆಯ ಹಕ್ಕನ್ನು ಒಪ್ಪಂದದ ಮೇಲೆ ತೆಗೆದುಕೊಂಡಿದೆ. ಬದಲಾಗಿ ಅಭಿವೃದ್ಧಿಗಾಗಿ ಧನಸಹಾಯ ನೀಡಲು ಒಪ್ಪಿಕೊಂಡಿದೆ.

ಇಲ್ಲಿ ಯಾವ ಖನಿಜಗಳೂ ದೊರೆಯುವುದಿಲ್ಲ. ನೌರು ದ್ವೀಪದಲ್ಲಿ ಮಾತ್ರ ಫಾಸ್ಫೇಟ್ ದೊರೆಯುತ್ತದೆ ಮತ್ತು ಅಲ್ಲಿ ಅದರ ಸಂಸ್ಕರಣಾ ಕೈಗಾರಿಕೆಗಳಿವೆ. ಅನೇಕ ದ್ವೀಪಗಳಲ್ಲಿ ಹವಳದ ಸುಣ್ಣಕಲ್ಲನ್ನು ಸಿಮೆಂಟ್ ತಯಾರಿಸಲು ಉಪಯೋಗಿಸುತ್ತಾರೆ. ಗ್ರಾಮ್‍ನಲ್ಲಿ ಪೆಟ್ರೋಲಿಯಮ್ ಶುದ್ಧೀಕರಣದ ಕಾರ್ಖಾನೆ, ಸಿಮೆಂಟ್, ಬಟ್ಟೆ ಮತ್ತು ಗಡಿಯಾರಗಳನ್ನು ತಯಾರಿಸುವ ಕಾರ್ಖಾನೆಗಳಿವೆ. ಉಳಿದ ದ್ವೀಪಗಳಲ್ಲಿ ಕೊಬ್ಬರಿ ಎಣ್ಣೆ ಮತ್ತು ಮೀನುಗಳ ಸಂಸ್ಕರಣ, ಪೀಠೋಪಕರಣ, ಸಣ್ಣ ದೋಣಿಗಳು, ಪಾನೀಯಗಳು ಮತ್ತು ಕುಶಲವಸ್ತುಗಳ ತಯಾರಿಕೆ ನಡೆಯುತ್ತದೆ. ಕಿರಿಬಾಟಿಯಲ್ಲಿ ಬಟ್ಟೆಯ ಕಾರ್ಖಾನೆಯಿದೆ. ಪ್ರವಾಸೋದ್ಯಮ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಸೊಗಸಾದ ಸಮುದ್ರ ತೀರಗಳು, ಮನೋಹರ ಪ್ರಕೃತಿ ಸೌಂದರ್ಯ, ಸ್ಥಳೀಯವಾಗಿ ತಯಾರಾದ ಕರ ಕುಶಲ ವಸ್ತುಗಳು, ಮನಮೋಹಕ ನೃತ್ಯ ಮತ್ತಿತರ ಸಮಾರಂಭಗಳು ಎರಡನೆಯ ಮಹಾಯುದ್ಧ ನಡೆದ ಸ್ಥಳಗಳು, ದೋಣಿ ಸಂಚಾರ ಇಲ್ಲಿಯ ಆಕರ್ಷಣೆಗಳು. 

ಮೈಕ್ರೊನೇಷ್ಯದಲ್ಲಿಯ ಪ್ರಮುಖ ದ್ವೀಪಗಳ ವಿವರಗಳು ಮುಂದಿನಂತಿವೆ:

ದ್ವೀಪ 	ಸ್ಥಾನಮಾನ	ವಿಸ್ತೀರ್ಣ 	ಜನಸಂಖ್ಯೆ
ಗ್ವಾಮ್ 	ಅಮೆರಿಕ ಆಧೀನ	549 ಚ.ಕಿ.ಮೀ	110,000
ಕಿರಿಬಾಟಿ	ಸ್ವತಂತ್ರ 	719 ಚ.ಕಿ.ಮೀ	 56,000
ನೌರು 	ಸ್ವತಂತ್ರ 	 21 ಚ.ಕಿ.ಮೀ	 8,000
ಪೆಸಿಫಿಕ್ ದ್ವೀಪಗಳ ನ್ಯಾಸ 
ಪ್ರದೇಶ (ಕರೊಲಿನ್, ಮಾರಿ
ಯಾನಾ, ಮಾರ್ಷಲ್	ಸ್ವಯಮಾಡಳಿತ ಪ್ರದೇಶ	1857 ಚ.ಕಿ.ಮೀ	133,836
ಮುಂತಾದವು ಸೇರಿ)
ವೇಕ್ ದ್ವೀಪ	ಅಮೆರಿಕ ಅಧೀನ 	 8 ಚ.ಕಿ.ಮೀ	 1,647

ಇತಿಹಾಸ: ಪಶ್ವಿಮ ಮೈಕ್ರೊನೇಷ್ಯದಲ್ಲಿ ಕ್ರಿ.ಪೂ. 1500 ಅನಂತರ ಇಂಡೊನೇಷ್ಯ ಅಥವಾ ಫಿಲಿಪೀನ್ಸ್‍ನಿಂದ ಜನರು ಮೊದಲು ನೆಲಸಿದರೆಂದು ಹೇಳುವರು. ಪೂರ್ವ ಮೈಕ್ರೊನೇಷ್ಯದಲ್ಲಿ ಸುಮಾರು ಅದೇ ಕಾಲದಲ್ಲಿ ಪೂರ್ವ ಮಲೇಷ್ಯದಿಂದ ಜನರು ಬಂದು ನೆಲಸಿದರೆಂದು ಹೇಳಲಾಗುತ್ತದೆ. ಇಲ್ಲಿ 1668ರಲ್ಲಿ ಸ್ಪೇನ್ ಮೊದಲನೆಯ ಯುರೋಪಿಯನ್ ವಸಾಹತನ್ನು ಸ್ಥಾಪಿಸಿತು. 1885-99ರಲ್ಲಿ ಸ್ಪೇನ್ ಈ ದ್ವೀಪಗಳನ್ನು ಜರ್ಮನಿಗೆ ಮಾರಿತು. ಜಪಾನ್ 1914ರಲ್ಲಿ ಇವುಗಳನ್ನು ಆಕ್ರಮಿಸಿತು. 1920ರಲ್ಲಿ ಲೀಗ್ ಆಫ್ ನೇಷನ್ಸ್ ಈ ದ್ವೀಪಗಳಲ್ಲಿ ಆಡಳಿತ ನಡೆಸಲು ಜಪಾನಿಗೆ ಒಪ್ಪಿಸಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನೀಯರು ಇಲ್ಲಿ ಮಿಲಿಟರಿ ದೃಷ್ಟಿಯಿಂದ ಮಹತ್ತ್ವವಾದ ಭದ್ರತೆಯನ್ನು ಏರ್ಪಡಿಸಿದರು. ಘೋರವಾದ ಯುದ್ಧದ ಬಳಿಕ 1944ರಲ್ಲಿ ಅಮೆರಿಕ ಇದನ್ನು ವಶಪಡಿಸಿಕೊಂಡಿತು. 1947 ರಲ್ಲಿ ವಿಶ್ವಸಂಸ್ಥೆ ಈ ಪ್ರದೇಶವನ್ನು ಅಮೆರಿಕಗೆ ನ್ಯಾಸಪ್ರದೇಶವನ್ನಾಗಿ ನೀಡಿತು. 

ಏಳು ವರ್ಷಗಳ ಕಾಲ ಅಮೆರಿಕೆಯ ನೌಕಾಸೇನೆ ಆಡಳಿತ ನಡೆಸಿದ ಅನಂತರ ಅಮೆರಿಕ ಸರ್ಕಾರದ ಒಳಾಡಳಿತ ಇಲಾಖೆಯ ವಶಕ್ಕೆ ಬಂದು ಇದಕ್ಕೆ ಒಬ್ಬ ಹೈಕಮಿಷನರನ್ನು ನೇಮಿಸಲಾಯಿತು. ಸ್ಥಳೀಯ ಸರ್ಕಾರಗಳಿಗೆ ಪ್ರತಿನಿಧಿಗಳನ್ನು ಚುನಾಯಿಸುವ ಅವಕಾಶ ದ್ವೀಪದ ಜನರಿಗೆ ದೊರೆಯಿತು. 1946-58 ಅವಧಿಯಲ್ಲಿ ಬಿಕಿನಿ ಮತ್ತು ಎನಿವೆಟೋಕ್ ಅಟಾಲ್‍ಗಳಲ್ಲಿ ಅಣುಶಕ್ತಿ ಪ್ರಯೋಗಗಳು ನಡೆದು ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. 

1968 ರಲ್ಲಿ ಅಮೆರಿಕದ ಫೆಡರಲ್ ಸರ್ಕಾರದ ಮಾದರಿಯಲ್ಲಿ ಮೂರು ಅಂಗಗಳುಳ್ಳ ಸರ್ಕಾರವನ್ನು ರಚಿಸಲಾಯಿತು. ಸ್ವಾತಂತ್ರ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು 1973-74ರಲ್ಲಿ ಕಾಂಗ್ರೆಸ್ ಆಫ್ ಮೈಕ್ರೊನೇಷ್ಯ ರಾಜ್ಯಾಂಗದ ಸಭೆ ನಡೆಸಲು ಮಾರ್ಗದರ್ಶಕ ಸೂತ್ರಗಳನ್ನು ತಯಾರಿಸಿತು. 1978ರಲ್ಲಿ ರಾಜ್ಯಾಂಗವನ್ನು ಜಾರಿಗೆ ತಂದಾಗ ಸ್ಥಳೀಯ ಭಿನ್ನಾಭಿಪ್ರಾಯಗಳಿಂದ ಈ ಪ್ರದೇಶವನ್ನು ನಾಲ್ಕು ಕ್ಷೇತ್ರಗಳನ್ನಾಗಿ ವಿಭಾಗ ಮಾಡಲಾಗಿದೆ. ಕೊಸ್ರೆ, ಪನಾಪೆ, ಟ್ರುಕ್ ಮತ್ತು ಯಾಪ್ ದ್ವೀಪಗಳು ರಾಜ್ಯಾಂಗವನ್ನು ಒಪ್ಪಿ ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೊನೇಷ್ಯ ರಚಿಸಿಕೊಂಡವು. ರಾಜ್ಯಾಂಗವನ್ನು ತಿರಸ್ಕರಿಸಿದ ದ್ವೀಪಗಳ ಪೈಕಿ ಉತ್ತರ ಮಾರಿಯಾನಾಸ್ 1978 ರಲ್ಲಿ ಅಮೆರಿಕಾದೊಂದಿಗೆ ಕಾಮನ್ ವೆಲ್ತ್ ಸ್ಥಾನಮಾನವನ್ನು ಹೊಂದಿತು. ಮಾರ್ಷಲ್ಸ್ ದ್ವೀಪಗಳು 1979ರಲ್ಲಿ ಸ್ವತಂತ್ರ ರಾಜ್ಯಾಂಗವನ್ನು ರಚಿಸಿಕೊಂಡವು. ಪಲಾವೊ 1980ರಲ್ಲಿ ಗಣರಾಜ್ಯವಾಯಿತು. 
  									(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ